ದೇವ್, ಶಂಕರ ದತ್ತಾತ್ರೇಯ
1894-1974. ಖ್ಯಾತ ಗಾಂಧೀವಾದಿ, ಸ್ವಾತಂತ್ರ್ಯ ಹೋರಾಟಗಾರ, ಶಂಕರರಾವ್ ದೇವ್ ಎಂದೇ ಜನಪ್ರಿಯರು. ಪುಣೆ ಜಿಲ್ಲೆಗೆ ಸೇರಿದ ಭೋರ್ ಎಂಬಲ್ಲಿ, ಚಿತ್‍ಪಾವನ ಬ್ರಾಹ್ಮಣ ಕುಟುಂಬವೊಂದರಲ್ಲಿ 1894 ಜನವರಿ 4ರಂದು ಹುಟ್ಟಿದರು. ಅವರ ತಂದೆ ದತ್ತಾತ್ರೇಯ ನಾರಾಯಣ ದೇವ್, ತಾಯಿ ಗಂಗೂಬಾಯಿ. ತಂದೆ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಶಂಕರಿಗೆ ಇನ್ನೂ ಎರಡೂವರೆ ವಯಸ್ಸಾಗಿದ್ದಾಗಲೇ ಅವರ ತಾಯಿ ತೀರಿಕೊಂಡರು. ಹುಡುಗನ ಪೋಷಣೆಯ ಜವಾಬ್ದಾರಿಯನ್ನು ತಾತ ವಹಿಸಿಕೊಂಡರು. ಚಿಕ್ಕಪ್ಪಂದಿರ ಸಹಾಯದಿಂದ ಶಂಕರ ಪುಣೆಯಲ್ಲಿ ಮೆಟ್ರಿಕ್ಯುಲೇಷನ್ ತನಕ ಓದಿದರು.  ಆದರೆ ಅವರು ಪರೀಕ್ಷೆಯಲ್ಲಿ ಉತ್ತೀರ್ಣರಾಗಲಿಲ್ಲ. ಅವರು ಗೃಹ ತ್ಯಜಿಸಿ ಬರೋಡಕ್ಕೆ ತೆರಳಿ ಅಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು. ಅಲ್ಲಿ ವಿನೋಭಾ ಭಾವೆಯವರು ಅವರ ಸಹಪಾಠಿ. ಅಲ್ಲಿಂದ ಅವರು ಉನ್ನತ ಶಿಕ್ಷಣಕ್ಕಾಗಿ ಮುಂಬಯಿಗೆ ಹೋಗಿ ಅಲ್ಲಿ ಬಿ.ಎ. ಪದವಿ ಪಡೆದರು (1918). ಅನಂತರ ಎಲ್‍ಎಲ್.ಬಿ. ಓದಲು ಸೇರಿದರು. ಮೊದಲನೆಯ ವರ್ಷ ಮುಗಿಯುವ ಮೊದಲೇ ತಮ್ಮ ವಿದ್ಯಾಭ್ಯಾಸವನ್ನು ಬಿಟ್ಟು ಸ್ವಾತಂತ್ರ್ಯ ಹೋರಾಟದಲ್ಲಿ ದುಮುಕಿದರು.

	ಮಹಾತ್ಮ ಗಾಂಧಿಯವರು ಬಿಹಾರದ ಚಂಪಾರಣ್ಯದಲ್ಲಿ ಸತ್ಯಾಗ್ರಹ ನಡೆಸುತ್ತಿದ್ದಾಗ ಅಲ್ಲಿಗೆ ಧಾವಿಸಿದ ಶಂಕರು ರಾಜೇಂದ್ರ ಪ್ರಸಾದರೊಡಗೂಡಿ ಹಳ್ಳಿ ಹಳ್ಳಿಗಳನ್ನು ಸುತ್ತಿ ಸತ್ಯಾಗ್ರಹಕ್ಕೆ ಜನರನ್ನು ಹುರಿದುಂಬಿಸಿದರು. ಅನಂತರ ಪುಣೆಗೆ ಹಿಂದಿರುಗಿ ಗಾಂಧೀಜಿಯವರ ರಚನಾತ್ಮಕ ಕಾರ್ಯಕ್ರಮದಲ್ಲಿ ನಿರತರಾದರು. ಸ್ವಾತಂತ್ರ್ಯ ಸಾಧನೆಗಾಗಿ ತಮ್ಮ ಜೀವನವನ್ನು ಮುಡುಪಿಡುವ ಉದ್ದೇಶದಿಂದ ಅವರು ಆಜೀವ ಬ್ರಹ್ಮಚಾರಿಯಾಗಿ ಉಳಿದರು.

	ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಅವರು ಅನೇಕ ಬಾರಿ ಸೆರೆಮನೆ ಸೇರಬೆಕಾಯಿತು. 1921ರಲ್ಲಿ ಪುಣೆ ಜಿಲ್ಲೆಯ ಮುಲ್ಲಿ ಎಂಬಲ್ಲಿ ತಾತಾ ಕಂಪನಿಯವರು ತಮ್ಮ ಉದ್ಯಮಕ್ಕಾಗಿ ಬಡ ರೈತರಿಂದ ಅನ್ಯಾಯವಾಗಿ ಜಮೀನು ಕಸಿಯಲು ಉದ್ಯುಕ್ತರಾದಾಗ ಸೇನಾಪತಿ ಬಾಪಟ ರೊಡನೆ ಸೇರಿ ಶಂಕರರು ಸತ್ಯಾಗ್ರಹ ನಡೆಸಿದರು. ಇದರಿಂದ ಅವರಿಗೆ ಕಾರಾಗೃಹ ಶಿಕ್ಷೆಯಾಯಿತು. 1923ರಲ್ಲಿ ನಡೆಸಿದ ಸತ್ಯಾಗ್ರಹಕ್ಕಾಗಿ ಮೂರು ತಿಂಗಳ ಕಠಿಣ ಶಿಕ್ಷೆಗೆ ಗುರಿಯಾದರು. ಆಗ ಆಷಾಢಮಾಸದ ಏಕಾದಶಿಯ ದಿನ; ಜೊತೆಯ ಸೆರೆಯಾಳುಗಳೊಡನೆ ಅವರು ಉಪವಾಸ ಮಾಡಿದರು. ಜೈಲು ನಿಯಮಾವಳಿಯಂತೆ ಕೆಲಸ ಮಾಡಲಿಲ್ಲವೆಂದು ಅವರು ಅಧಿಕಾರಿಗಳಿಂದ ವಿಚಾರಣೆಗೆ ಗುರಿಯಾಗಬೇಕಾಯಿತು. ಅವರಿಗೆ ಮೂವತ್ತು ಛಡಿ ಏಟಿನ ಶಿಕ್ಷೆ ವಿಧಿಸಲಾಯಿತು. ಒಂದೊಂದು ಛಡಿ ಏಟು ಬಿದ್ದಾಗಲೂ ಅವರು ಮಹಾತ್ಮ ಗಾಂಧೀ ಕಿ ಜೈ ಎಂದು ಕೂಗುತ್ತಿದ್ದರೆಂದೂ ಹಾಗೆಯೇ ಅವರ ಪ್ರಜ್ಞೆ ತಪ್ಪಿತೆಂದೂ ಹೇಳಲಾಗಿದೆ. ಈ ಪ್ರಕರಣದಿಂದ ಅವರ ಹೆಸರು ದೇಶಾದ್ಯಂತ ಪ್ರಚಾರವಾಯಿತು.

	ಮಹಾತ್ಮ ಗಾಂಧಿಯವರ ಅಸಹಕಾರ ಚಳುವಳಿಯ ಧ್ಯೇಯೋದ್ದೇಶಗಳನ್ನು ಪ್ರಚಾರಮಾಡಲು 1921ರಲ್ಲಿ ಅವರು ಪುಣೆಯಲ್ಲಿ ಅಸಹಕಾರ ಸಮಿತಿಯನ್ನು ಸ್ಥಾಪಿಸಿದರು.  1923ರಲ್ಲಿ ಅವರು ಮಹಾರಾಷ್ಟ್ರ ಪ್ರಾಂತೀಯ ಕಾಂಗ್ರೆಸ್ ಸಮಿತಿಯನ್ನು ಸ್ಥಾಪಿಸಿ 1930ರ ವರೆಗೆ ಅದರ ಕಾರ್ಯದರ್ಶಿಯಾಗಿಯೂ ಅನಂತರ ಅದರ ಅಧ್ಯಕ್ಷರಾಗಿಯೂ ಕೆಲಸ ಮಾಡಿದರು. ಎರಡು ದಶಕಗಳ ಕಾಲ ಮಹಾರಾಷ್ಟ್ರದಲ್ಲಿ ಅವರು ಕಾಂಗ್ರೆಸ್ಸಿನ ಅಗ್ರಗಣ್ಯ ನಾಯಕರೆನಿಸಿದ್ದರು.

	ಬಾರ್ಡೋಲಿ ಸತ್ಯಾಗ್ರಹದಲ್ಲಿ ಸರ್ದಾರ್ ಪಟೇಲರಿಗೆ ಸಕ್ರಿಯ ಸಹಕಾರ ನೀಡಿದರು. ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದರಲ್ಲದೆ 1940ರಲ್ಲಿ ವೈಯಕ್ತಿಕ ಸತ್ಯಾಗ್ರಹದಲ್ಲಿ ಭಾಗವಹಿಸಿ ಒಂದೂವರೆ ವರ್ಷ ಜೈಲುವಾಸ ಅನುಭವಿಸಿದರು. 1942ರ ಚಳವಳಿಯ ಸಮಯದಲ್ಲೊ ಸರ್ಕಾರ ಇವರನ್ನು ಸ್ಥಾನಬದ್ಧತೆಯಲ್ಲಿ ಇಟ್ಟಿತ್ತು. 1946ರಿಂದ 1950ರ ವರೆಗೆ ಇವರು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮಹಾಕಾರ್ಯದರ್ಶಿಯಾಗಿದ್ದರು.

	ಹಿಂದೂ ತತ್ತ್ವಶಾಸ್ತ್ರ ಮತ್ತು ಗಾಂಧಿ ವಿಚಾರದಲ್ಲಿ ಪರಿಣತರಾಗಿದ್ದ ದೇವ್ ಪ್ರಸಿದ್ಧ ಬರೆಹಗಾರರೂ ಪತ್ರಕರ್ತರೂ ಆಗಿದ್ದರು. 1920ರಲ್ಲಿ ಪುಣೆಯ ಲೋಕ ಸಂಗ್ರಹ ಸಾಪ್ತಾಹಿಕದ ಸಂಪಾದಕ ವರ್ಗದಲ್ಲಿದ್ದವರ ಪೈಕಿ ಇವರು ಒಬ್ಬರು. ಸ್ವರಾಜ್ಯ ವಾರಪತ್ರಿಕೆ (1925). ಲೋಕಶಕ್ತಿ ದಿನಪತ್ರಿಕೆ (1938), ಸತ್ಯಾಗ್ರಹಿವಾರಪತ್ರಿಕೆ (1940), ನವಭಾರತ (1940)--ಇವು ಶಂಕರರು ಆರಂಭಿಸಿದ ಕೆಲವು ಪತ್ರಿಕೆಗಳು, ರಾಷ್ಟೀಯ ವಿಚಾರಗಳನ್ನು ಜನಕ್ಕೆ ಸುಲಭ ಬೆಲೆಗೆ ಮುಟ್ಟಿಸುವ ಉದ್ದೇಶದಿಂದ ಸುಲಭ ರಾಷ್ಟೀಯ ಗ್ರಂಥಮಾಲೆಯನ್ನು ಆರಂಭಿಸಿದ್ದು ಅವರ ಸಾಧನೆಗಳಲ್ಲೊಂದು. ಮಾರಾಠಿಯಲ್ಲಿ ಅವರು ಬರೆದು ಪ್ರಕಟಿಸಿದ ಪುಸ್ತಕಗಳಲ್ಲಿ ಸ್ವರಾಜ್ಯ ಸೋಪಾನ್ (ಅಸಹಕಾರ ಚಳವಳಿ ಕುರಿತ ಲೇಖನಗಳು). ಉಪನಿಷದಾತೀಲ್ ದಹಾ ಗೋಷ್ಠಿ (ಉಪನಿಷತ್ತಿನ ಹತ್ತು ಕಥೆಗಳು), ಉಪನಿಷತ್ಸಾರ್ ಭಗವಾನ್ ಬುದ್ಧ-ಷಷ್ಟಿ-ಮುಖ್ಯವಾದವು. ಅಲ್ಲದೆ ಗಾಂಧೀಜಿಯವರ ಬರಹಗಳ ಮರಾಠಿ ಅನುವಾದಗಳನ್ನು ಅಹಸಕಾರಯೋಗ ಮತ್ತು ಮಹಾತ್ಮಾ ಗಾಂಧಿಯಾಚಾ ಕಾರಾಗೃಹಾನುಭವ್ ಎಂಬ ಎರಡು ಪುಸ್ತಕಗಳ ರೂಪಗಳ ರೂಪಕದಲ್ಲಿ ಪ್ರಕಟಿಸಿದ್ದಾರೆ.

	ಆಚಾರ್ಯ ವಿನೋಬಾ ಭಾವೆಯವರ ಭೂದಾನ ಮತ್ತು ಗ್ರಾಮದಾನ ಚಳವಳಿಯಲ್ಲಿ ಇವರು ಸಕ್ರಿಯ ಪಾತ್ರ ವಹಿಸಿ ದೇಶಾದ್ಯಂತ ಪಾದಯಾತ್ರೆ ಕೈಗೊಂಡಿದ್ದರು. 1962 ರಲ್ಲಿ ಭಾರತದ ಮೇಲೆ ಚೀನ ಆಕ್ರಮಣ ನಡೆಸಿದಾಗ ಚೀನದ ನೀತಿಯನ್ನು ಅಹಿಂಸಾತ್ಮಕವಾಗಿ ಪ್ರತಿಭಟಿಸುವ ದೃಷ್ಟಿಯಿಂದ ಶಂಕರರು ಅಂತರರಾಷ್ಟ್ರೀಯ ಶಾಂತಿ ಸೇವಕರ ತಂಡವನ್ನು ಸಜ್ಜುಗೊಳಿಸಿ ತಂಡದ ನಾಯಕತ್ವ ವಹಿಸಿ ಚೀನಕ್ಕೆ ಪಾದಯಾತ್ರೆ ಹೋಗುವ ಪ್ರಯತ್ನ ಮಾಡಿದರು. ಆದರೆ ಚೀನಕ್ಕೆ ಹಾದುಹೋಗಲು ನೆರೆಯ ರಾಷ್ಟ್ರಗಳು ಅವಕಾಶ ನೀಡಲಿಲ್ಲ. ಅದಕ್ಕಾಗಿ ಅದನ್ನು ಕೈಬಿಡಬೇಕಾಯಿತು. 

	ಸಂಯುಕ್ತ ಮಹಾರಾಷ್ಟ್ರ ಆಂದೋಳನದ ನಾಯಕತ್ವ ವಹಿಸಿದ್ದ ಶಂಕರರು ಈ ಚಳವಳಿ ಹಿಂಸಾರೂಪ ತಾಳಿದಾಗ ಪರಿಸ್ಥಿತಿಯನ್ನು ಹತೋಟಿಗೆ ತರಲು ಮೂವತ್ತು ದಿನಗಳ ಉಪವಾಸ ಮಾಡಿದ್ದರು.

	ಸ್ವಾತಂತ್ರ್ಯ ಹೋರಾಟಗಾರರನ್ನೂ ವಿಧಾಯಕ ಕಾರ್ಯಕರ್ತರನ್ನೂ ತರಬೇತು ಮಾಡಲು ಪುಣೆಯಬಳಿ ಸಾಸ್‍ವಾಡದಲ್ಲಿ 1934ರಲ್ಲಿ ಅವರು ಆರಂಭಿಸಿದ್ದ ಆಶ್ರಮ ಅನೇಕ ಕಾರ್ಯಕರ್ತರ ತರಬೇತು ಕೇಂದ್ರವಾಗಿತ್ತು. 1974ರ ಡಿಸೆಂಬರ್ 30ರಂದು ಅವರು ನಿಧನರಾದರು.										(ಬಿ.ಆರ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ